17-Mar-2026: ದಾ ನಗರವಾಣಿ ಸುದ್ದಿ
ದಾವಣಗೆರೆ.ಮಾ.17: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳಿಗೆ ತಮ್ಮ ಆಚಾರ-ವಿಚಾರ ಬದಲಿಸಿಕೊಳ್ಳಬೇಕು ಎಂದು ಹೇಳಿದ್ದೇವೆಯೇ ಹೊರತು, ಅವರನ್ನು ಪೀಠ ತ್ಯಾಗ ಮಾಡಿ ಎಂದು ಹೇಳಿಲ್ಲ ಮತ್ತು ಸಮಾಜದ ಜಗದ್ಗುರುಗಳಾಗಿ ಮುನ್ನಡೆಯುವ ಆಯ್ಕೆಯನ್ನು ಅವರಿಗೇ ಬಿಟ್ಟಿದ್ದೇವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಶ್ರೀಪೀಠದ ಧರ್ಮದರ್ಶಿಗಳು ಸ್ಪಷ್ಟಪಡಿಸಿದರು.
ಮಂಗಳವಾರ ನಗರದ ಪಂಚಮಸಾಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿ, ಇತ್ತೀಚೆಗೆ ಶ್ರೀಗಳ ಆಚಾರ-ವಿಚಾರಗಳÀಲ್ಲಿ ಅಲ್ಪ ವ್ಯತ್ಯಾಸ ಕಂಡುಬAದದ್ದನ್ನು ಸಮಾಜದ ಭಾಂಧವರು ನಮ್ಮ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ನಾವು ಅಂದರೆ, ಕೇವಲ ಟ್ರಸ್ಟಿಗಳ ಸಭೆ ಕರೆದು ನಾಲ್ಕು ಗೋಡೆಗಳ ಮಧ್ಯೆ ಹರಿಹರ ಪೀಠವು ಗೆಸ್ಟ್ ಹೌಸ್ ರೀತಿ ಆಗಿರದೇ, ಪಂಚಮಸಾಲಿ ಸಮಾಜದ ಮಠವಾಗಿರಬೇಕು. ಪಂಚಮಸಾಲಿ ಆಚಾರ, ವಿಚಾರ, ಸಂಪ್ರದಾಯಗಳನ್ನು ಮುನ್ನಡೆಸಿಕೊಂಡು ಹೋಗುವ ಕೆಲಸವು ಶ್ರೀಗಳಿಂದ ಆಗಬೇಕು ಎಂದು ತಿಳಿ ಹೇಳಿದ್ದೆವು ಎಂದರು.
ಸಮಾಜದ ಶ್ರೀಪೀಠದ ಗುರುಗಳಾಗಿ ಶ್ರೀ ವಚನಾನಂದ ಸ್ವಾಮೀಜಿ ಏನು ಮಾಡಬೇಕೋ ಅಂತಹದ್ದು ಆಗಬೇಕಾಗಿದೆ. ಆದರೆ, ಶ್ರೀಮಠದಲ್ಲಿ ಶ್ರೀಗಳನ್ನು ಪೀಠದಿಂದ ತೆಗೆಯಲು ಸಭೆ ಕರೆದಿದ್ದಾರೆಂದು ಸುಳ್ಳು ಸುದ್ದಿ ಹರಡಿ, ಗದ್ದಲ ಎಬ್ಬಿಸಿದ್ದು ಸರಿಯಲ್ಲ. ಶ್ರೀ ವಚನಾನಂದ ಸ್ವಾಮೀಜಿಗಳನ್ನು ಪೀಠದಿಂದ ತೆಗೆಯುವುದಲ್ಲ, ತಿದ್ದುವ ಕೆಲಸ ಆಗಬೇಕಾಗಿದೆ. ವಿವಿಧ ಮಠಾಧೀಶರು ಹೇಗೆ ತಮ್ಮ ಸಮುದಾಯಗಳನ್ನು ಮುನ್ನಡೆಸುತ್ತಾರೋ, ಆಚಾರ, ವಿಚಾರ, ಸಂಪ್ರದಾಯವನ್ನು ಕಲಿಸುತ್ತಾರೋ, ಅಂತಹ ಕೆಲಸವೂ ಶ್ರೀಗಳಿಂದ ಆಗಬೇಕು ಎಂದು ಅವರು ತಿಳಿಸಿದರು.
ಪೀಠದ ಆಡಳಿತಾಧಿಕಾರಿಗಳು ಹಾಗೂ ಇತರರ ಆರೋಪದಂತೆ ಶ್ರೀಮಠದಲ್ಲಿ ನಯಾಪೈಸೆಯೂ ವ್ಯತ್ಯಾಸವಾಗಿಲ್ಲ. ಪಂಚಮಸಾಲಿ ಪೀಠ ನಮ್ಮಂತಹ ಲಕ್ಷಾಂತರ ಜನರ ಕನಸು. ಸಮಾಜದ ಋಣ ತೀರಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಶ್ರೀಗಳು ಹಿರಿಯರನ್ನು ದೂರ ಇಡುತ್ತಿದ್ದರು. ಟ್ರಸ್ಟಿಗಳನ್ನೇ ಬದಲಿಸಲು ಹೇಳುತ್ತಿದ್ದರು. ಸೋಲ್ ಟ್ರಸ್ಟ್ ಮಾಡಿದರೆ, ತಾವು ಮುನ್ನಡೆಸುವುದಾಗಿ ಹೇಳುತ್ತಿದ್ದರು. ಪಂಚಮಸಾಲಿ ಪೀಠವನ್ನು 1994ರಿಂದ ಎಲ್ಲರೂ ಪ್ರಯತ್ನಪಟ್ಟು, ಸಾಕಷ್ಟು ಪರಿಶ್ರಮದಿಂದ ಕಟ್ಟಿದ್ದೇವೆ. ಅಂತಹ ಮಠದ ಟ್ರಸ್ಟಿಗಳನ್ನು ಬದಲಿಸುವಂತೆ ಹೇಳುವುದು, ಸೋಲ್ ಟ್ರಸ್ಟ್ ಮಾಡುವಂತೆ ಹೇಳುವುದೆಂದರೆ ಏನರ್ಥ? ಎಂದು ಅವರು ಪ್ರಶ್ನಿಸಿದರು.
ಟ್ರಸ್ಟಿಗಳು ಸೇರಿದಂತೆ ಯಾರೂ ಸಹ ಸ್ವಾಮೀಜಿಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟಿಲ್ಲ. ನಮ್ಮದು ರಾಜಕೀಯವಾಗಲೀ, ಸ್ವಾರ್ಥದ ಕೆಲಸವಾಗಲಿ ಅಲ್ಲ. ಶ್ರೀ ವಚನಾನಂದ ಸ್ವಾಮೀಜಿ 10 ದಿನವೆಂದು 40 ದಿನಗಳ ವಿದೇಶ ಪ್ರವಾಸಕ್ಕೆ ಹೋದರು. ಪ್ರಯಾಗರಾಜಗೂ ಹೋಗಿ ಬಂದರು ಆದರೂ ನಮ್ಮ ಸ್ವಾಮೀಜಿ ಜ್ಞಾನಾರ್ಜನೆಗೆ ಹೋಗಿದ್ದಾರೆ ಎಂದು ಕೊಂಡೆವು. ಸಮಾಜವನ್ನು ಕಟ್ಟಿದವರು ನಾವು. ಹರಜಾತ್ರೆಯನ್ನು ಸರಳವಾಗಿ ಮಾಡುವಂತೆ ಹೇಳಿದ್ದೆವು. ಆದರೆ, ತಮಗೆ ತಿಳಿದಂತೆ ಸ್ವಾಮೀಜಿ ಮಾಡಿದರು. ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಸಂತೋಷ ಲಾಡ್ ವೇದಿಕೆಯಲ್ಲಿಲ್ಲದಿದ್ದರೂ ಅಂತಹವರನ್ನು ಹೊಗಳಿ, ಎದ್ದು ಚಪ್ಪಾಳೆ ತಟ್ಟುವಂತೆ ಸಮಾಜಕ್ಕೆ ಕರೆ ನೀಡುತ್ತಾರೆಂದರೆ ಇದನ್ನು ಸಂಘಟನೆ ಎನ್ನಬೇಕೆ? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚಿಗೆ ನಡೆದ ಸಾಮಾನ್ಯ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಸಾಧಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸನ್ಮಾನ ಮಾಡುತ್ತಿರುವಾಗ ನಮ್ಮ ಶ್ರೀಗಳು ಅವರಿಗೆ ಹಾರ, ಶಾಲು, ಟೋಪಿ ತಂದುಕೊಡುವ ಕೆಲಸ ಮಾಡುತ್ತಿದ್ದರು. ಸುಮಾರು 80 ಲಕ್ಷ ಜನಸಂಖ್ಯೆ ಇರುವ ಪಂಚಮಸಾಲಿ ಸಮಾಜದ ಜಗದ್ಗುರುಗಳು ಸಾಮಾನ್ಯರಂತೆ ಕೆಲಸ ಮಾಡುವುದನ್ನು ಸಹಿಸದೇ ನಮ್ಮ ಸಮಾಜದ ಜನರು ಬೇಸರಗೊಂಡು ನಮ್ಮ ಬಳಿ ನೋವು ತೋಡಿಕೊಂಡಿದ್ದರು. ಶ್ರೀಗಳು ಈ ಬಗ್ಗೆ ಮತ್ತು ತಮ್ಮ ಸಮಾಜದ ಆಚಾರ-ವಿಚಾರಗಳ ಬಗ್ಗೆ ಆಲೋಚಿಸಬೇಕಿದೆ ಎಂದರು.
ಧರ್ಮದರ್ಶಿ ಚಂದ್ರಶೇಖರ ಪೂಜಾರ ಮಾತನಾಡಿ, ನನ್ನ ಬಳಿ 25 ಲಕ್ಷ ರೂ. ಚೆಕ್ ಕೊಟ್ಟಿದ್ದೇನೆಂದವರು ಅದನ್ನು ಸಾಬೀತುಪಡಿಸಬೇಕಲ್ಲವೇ? ಹೀಗೆ ಸುಳ್ಳು ಹೇಳಿ ಹೋದರೆ, ನಾವು ಜನರ ಮಧ್ಯೆ ಬಾಳುವುದಕ್ಕೆ ಸಾಧ್ಯವೇ? ಸ್ಥಳೀಯವಾಗಿ ನಮಗೆಷ್ಟು ಕಷ್ಟವಾಗುತ್ತದೆಂಬ ಅರಿವು ಅಂತಹವರಿಗೆ ಇಲ್ಲವೇ? ಮಾಜಿ ಶಾಸಕ ಅರುಣಕುಮಾರ 1.60 ಕೋಟಿ ರೂ. ಕೊಟ್ಟಿದ್ದರೆ ಅದನ್ನೇನಾದರೂ ಲಿಖಿತವಾಗಿ ನೀಡಿದ್ದಾರಾ? ಯಾರೇ ಆಗಲಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನಿಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬೀದಿಗೆ ತರಬೇಡಿ. 120 ಕೆಜಿ ಅಲ್ಲ, 174 ಕೆಜಿ ಬೆಳ್ಳಿ ನಮ್ಮ ಮಠದ್ದು ಇರುವುದು. ಅದನ್ನು ಸುರಕ್ಷಿತವಾಗಿ ಬ್ಯಾಂಕ್ ಲಾಕರ್ ನಲ್ಲಿ ಬಿ.ಸಿ.ಉಮಾಪತಿ ಇತರೆ ಧರ್ಮದರ್ಶಿಗಳು ಇಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ಹಿರಿಯ ಮುಖಂಡ ಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ ಮಾತನಾಡಿ, 2008ರಿಂದಲೂ ಪೀಠ, ಸಮಾಜದ ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಕುಳಿತು ಸಮಸ್ಯೆ ಪರಿಹರಿಸುತ್ತಿದ್ದೆವು. ಸ್ವಾಮೀಜಿಯನ್ನು ಪಂಚಮಸಾಲಿ ಪೀಠಕ್ಕೆ ಕರೆ ತರುವಾಗಲೇ ಶ್ವಾಸಪೀಠ ತ್ಯಜಿಸಬೇಕು. ನಮ್ಮ ಸಮಾಜದ ಅನುಷ್ಠಾನ, ಆಚರಣೆ, ಸಂಘಟನೆ, ಸಮಾಜದ ಕೆಲಸದಲ್ಲಿ ತೊಡಗಬೇಕೆಂದು ಹೇಳಿದ್ದೆವು. ಶ್ರೀಮಠದಲ್ಲಿ ಪೂಜೆ, ಪುನಸ್ಕಾರ ನಿರಂತರ ನಡೆಯಬೇಕೆಂದು ಎಲ್ಲರೂ ಹೇಳಿದ್ದೆವು. ಸ್ವಾಮೀಜಿ ವರ್ತನೆಯಲ್ಲಿ ವ್ಯತ್ಯಾಸವಾದರೆ ಬೈಲಾ ಪ್ರಕಾರ ಬದಲಾವಣೆಗೆ ಅವಕಾಶವಿದೆ. ಸ್ವಾಮೀಜಿ ಏನೇನೋ ಪದ ಬಳಸಿ, ಅವಾಚ್ಯವಾಗಿ ಮಾತನಾಡುವುದು ಸರಿಯಲ್ಲ. ಸ್ವಾಮೀಜಿ ಬಾಯಿಯಿಂದ ಇಂತಹ ಪದ ಬರಬಾರದು. ನಿಮ್ಮ ನಡವಳಿಕೆ, ನಡತೆ ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಸವರಾಜ್ ದಿಂಡೂರ್, ಪಿ.ಡಿ.ಶಿರೂರು, ಜ್ಯೋತಿಪ್ರಕಾಶ, ಕಳಸನಗೌಡ, ನಾಗಣ್ಣ ಚಿತ್ರದುರ್ಗ, ಹಾವೇರಿ ಮಹೇಶ, ನಿಡೋಣಿ, ಬಾಬಣ್ಣ, ಪರಮೇಶ ಪಟ್ಟಣಶೆಟ್ಟಿ, ವಸಂತ, ಪುಷ್ಪಾ ಹುಲ್ಲತ್ತಿ, ರಶ್ಮಿ ಕುಂಕೋದ್, ಕೊಟ್ರೇಶ, ಕಕ್ಕರಗೊಳ್ಳ ಮಂಜುನಾಥ ಪುರವಂತರ, ರವಿಕುಮಾರ ಬಾತಿ ಇತರರು ಇದ್ದರು. |